ಯಳಂದೂರು
ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ (1997 ಆಗಸ್ಟ್ 15) ಅತ್ಯಂತ ಸಣ್ಣ ತಾಲ್ಲೂಕು ಮತ್ತು ತಾಲ್ಲೂಕಿನ ಕೇಂದ್ರಸ್ಥಳ.  ವಾಯುವ್ಯದಿಂದ ಪೂರ್ವ ದಿಕ್ಕಿನವರೆಗೆ ಕೊಳ್ಳೇಗಾಲ ಮತ್ತು ದಕ್ಷಿಣ, ಪಶ್ಚಿಮಗಳಲ್ಲಿ ಚಾಮರಾಜನಗರ ತಾಲ್ಲೂಕುಗಳಿಂದ ಸುತ್ತುವರೆದಿರುವ ಈ ತಾಲ್ಲೂಕಿನಲ್ಲಿ ಯಳಂದೂರು ಮತ್ತು ಅಗರ ಎಂಬ ಎರಡು ಹೋಬಳಿಗಳಿವೆ.  ಗ್ರಾಮಗಳ ಸಂಖ್ಯೆ 28.  ವಿಸ್ತೀರ್ಣ 264.7 ಚಕಿಮೀ.  ತಾಲ್ಲೂಕಿನ ಜನಸಂಖ್ಯೆ 71.700(1991).  ಇತರ ಮುಖ್ಯ ಊರುಗಳು ಅಗರ, ಅಂಬಳೆ, ಮಾಂಬಳ್ಳಿ, ಹೊಮ್ಮ, ಗುಂಬಳ್ಳಿ, ಮದ್ದೂರು, ಯರಗನಹಳ್ಳಿ ಮತ್ತು ಯರಿಯೂರು.  ಹವಾಗುಣ ಹಿತಕರವಾಗಿದೆ.  ವಾರ್ಷಿಕ ಮಳೆ ಸರಾಸರಿ 78 ಸೆಂಮೀ.  ತಾಲ್ಲೂಕಿನ ದಕ್ಷಿಣದಲ್ಲಿ ಬಿಳಿಗಿರಿರಂಗನ ಬೆಟ್ಟಗಳ ಸಾಲು, ಅದರ ಸುತ್ತ ದಟ್ಟ ಕಾಡುಗಳಿದ್ದರೆ, (ಸುಮಾರು 10.722 ಹೆಕ್ಟೇರ್ ಕಾಡು ಪ್ರದೇಶ)  ಉತ್ತರ ಭಾಗದಲ್ಲಿ ಸುವರ್ಣಾವತಿ ಅಥವಾ ಹೊನ್ನುಹೊಳೆ ನದಿ ಮತ್ತು ಹಲವಾರು ಕೆರೆಗಳಿವೆ.  ಸುವರ್ಣಾವತಿ ಅಂಬಳೆಯ ಬಳಿ ತಾಲ್ಲೂಕನ್ನು ನೈಋತ್ಯದಿಂದ ಪ್ರವೇಶಿಸಿ ಯಳಂದೂರು ಮೂಲಕ ಹರಿದು ಈಶಾನ್ಯದಲ್ಲಿ ಅಗರ ಗ್ರಾಮದ ಬಳಿ ಕೊಳ್ಳೇಗಾಲ ತಾಲ್ಲೂಕನ್ನು ತಲಪುತ್ತವೆ.  ಅಗರದ ಕೆರೆಗೆ ಇದು ನೀರನ್ನು ಒದಗಿಸುತ್ತದೆ. ಕೆರೆಗಳ ನೀರಾವರಿಯಿಂದ ಕಬ್ಬು, ಬತ್ತಗಳನ್ನೂ ಮಳೆಯ ಆಶ್ರಯದಿಂದ ರಾಗಿ ಮತ್ತು ಜೋಳಗಳನ್ನೂ ಬೆಳೆಯುತ್ತಾರೆ. ತೆಂಗು, ಅಡಕೆ, ಹಿಪ್ಪನೇರಳೆ ಮತ್ತು ವೀಳೆಯದೆಲೆ ಮುಖ್ಯ ವಾಣಿಜ್ಯ ಬೆಳೆಗಳು.  ಕಾಡುಗಳಲ್ಲಿ ತೇಗ, ಹೊನ್ನೆ, ಮತ್ತಿ, ಬೀಟೆ, ಕಲ್ಲುಬಾಗಿ ಮರಗಳು ಬೆಳೆಯುತ್ತವೆ.  ಆನೆ, ಕಾಡೆಮ್ಮೆ, ಜಿಂಕೆ, ಕರಡಿ ಮತ್ತು ಚಿರತೆ ಪ್ರಮುಖ ವನ್ಯಜೀವಿಗಳು.
ಕುದೇರು ಮತ್ತು ಮಾಂಬಳ್ಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಹಿಪ್ಪುನೇರಳೆ ಸೊಪ್ಪು ಬೆಳೆಯುವುದರಿಂದ ರೇಷ್ಮೆ ಕೈಗಾರಿಕೆ ಅಭಿವೃದ್ಧಿಯಾಗಿದೆ.  ರೇಷ್ಮೆ ನೂಲು ತೆಗೆಯುವುದು ಪ್ರಮುಖ ಗೃಹಕೈಗಾರಿಕೆ.  ಬ್ಯಾಂಕುಗಳು, ಸಹಕಾರ ಸಂಘಗಳು ಸಾಲಸೌಲಭ್ಯ ಒದಗಿಸಿದೆ. ನಂಜನಗೂಡು-ಕೊಳ್ಳೇಗಾಲ ಮತ್ತು ಚಾಮರಾಜನಗರ-ಯಳಂದೂರು ರಸ್ತೆಗಳು ವಾಹನ ಸಂಚಾರ ಸೌಲಭ್ಯವನ್ನೊದಗಿಸಿವೆ.  ಚಾಮರಾಜನಗರದ ರೈಲ್ವೆ ನಿಲ್ದಾಣ ಯಳಂದೂರಿನಿಂದ 19 ಕಿಮೀ. ದೂರದಲ್ಲಿದೆ.  ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗಳವರೆಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಇದೆ.  ಯಳಂದೂರು, ಅಗರ ಮಾಂಬಳ್ಳಿಗಳಲ್ಲಿ ಆರೋಗ್ಯ ಕೇಂದ್ರಗಳು ಮತ್ತು ಅಂಚೆ-ತಂತಿ ವಿದ್ಯುತ್ ಸೌಲಭ್ಯಗಳು ಲಭ್ಯವಿದೆ. ಈ ತಾಲ್ಲೂಕಿನಲ್ಲಿ ದೊರೆಯುವ ಹಲವಾರು ಶಾಸನಗಳಿಂದ ಈ ಪ್ರದೇಶ ಗಂಗರ ಮತ್ತು ಚೋಳ ಹೊಯ್ಸಳರ ಅಧೀನವಾಗಿತ್ತೆಂದು ತಿಳಿದುಬರುತ್ತದೆ. ಅನಂತರ ವಿಜಯನಗರದ ಕಾಲದಲ್ಲಿ ಹದಿನಾರು ಪ್ರಾಂತ್ಯವಾಗಿ ಅವರ ವಶದಲ್ಲಿತ್ತು.  1654ರಲ್ಲಿ ಮೈಸೂರು ಒಡೆಯರ ಕೈವಶವಾಯಿತು. 1807ರಲ್ಲಿ ಬ್ರಿಟಿಷರ ಒಪ್ಪಿಗೆ ಪಡೆದು ಮುಮ್ಮಡಿ ಕೃಷ್ಣರಾಜ ಒಡೆಯರು ಅಂದಿನ ದಿವಾನ್ ಪೂರ್ಣಯ್ಯನವರಿಗೆ ರಾಜ್ಯಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯ ದ್ಯೋತಕವಾಗಿ ಜಹಗೀರಾಗಿ ಕೊಟ್ಟರು.  ಈಚೆಗೆ ಇನಾಂ ರದ್ಧತಿ ಶಾಸನದನ್ವಯ ಸಾಮಾನ್ಯ ಕಂದಾಯ ಗ್ರಾಮವಾಯಿತು.

ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು ಅಗರ ಮತ್ತು ಬಿಳಿಗಿರಿರಂಗನ ಬೆಟ್ಟ.  ಅಗರದಲ್ಲಿ ಚೋಳದೊರೆ ಮೊದಲ ರಾಜರಾಜನ ಕಾಲದ ದುರ್ಗಾದೇವಾಲಯದಲ್ಲಿ ಸಮಭಂಗದಲ್ಲಿ ನಿಂತಿರುವ ವೈಷ್ಣವೀರೂಪದ ಸುಂದರ ದುರ್ಘಾದೇವಿಯ ಮೂರ್ತಿ ಇದೆ.  ಮತ್ತೊಂದು ಚೋಳ ನಿರ್ಮಾಣ ನರಸಿಂಹ ದೇವಾಲಯ ಊರಿನ ಪ್ರಮುಖ ಮಂದಿರವಾಗಿದ್ದು ವೃತ್ತಾಕಾರದ ಗರ್ಭಗೃಹ, ಆಯಾಕಾರದ ಅಂತರಾಳ ಮತ್ತು ಚೌಕಾಕಾರದ ನವರಂಗಗಳಿವೆ.  ರಾಮೇಶ್ವರ ಮತ್ತು ವರದರಾಜ ಇಲ್ಲಿರುವ ಮತ್ತೆರಡು ಗುಡಿಗಳು.  ಗ್ರಾಮದಲ್ಲಿ ಚೋಳ ಮತ್ತು ಅನಂತರ ಕಾಲಸ ನೂರಾರು ಶಾಸನಗಳು ಕಂಡುಬಂದಿವೆ.  ಬಿಳಿಗಿರಿರಂಗನ ಬೆಟ್ಟವನ್ನು ಶ್ವೇತಾದ್ರಿ ಎಂದು ಕರೆಯುತ್ತಾರೆ. ಬೆಟ್ಟದ ಮೇಲಿರುವ ಬಿಳಿಗಿರಿರಂಗ ಅಥವಾ ಶ್ರೀನಿವಾಸ ದೇವಾಲಯ ಚೋಳರ ಮತ್ತು ಹೊಯ್ಸಳರ ಕಾಲದ ನಿರ್ಮಾಣಗಳಿಂದ ಕೂಡಿದ ಒಂದು ಪ್ರಕೃತಿ ರಮ್ಯಸ್ಥಳ ಪ್ರವಾಸಿ, ಕೇಂದ್ರ.  ಪ್ರತಿ ವರ್ಷ ವೈಶಾಖ ಮಾಸದಲ್ಲಿ ಇಲ್ಲಿ ರಥೋತ್ಸವ ನಡೆಯುತ್ತದೆ.  ಕಡಿದಾದ ಈ ಬೆಟ್ಟಪ್ರದೇಶದ ಕಾಡಿನಲ್ಲಿ ಸೋಲಿಗ ಆದಿವಾಸಿಗಳು ವಾಸಿಸುತ್ತಾರೆ.  ಆನೆಗಳನ್ನು ಪಳಗಿಸುವುದರಲ್ಲಿ ಇವರು ನಿಷ್ಣಾತರು.

ಯಳಂದೂರು ಈ ತಾಲ್ಲೂಕಿನ ಕೇಂದ್ರ ಮತ್ತು ಸುತ್ತಲ ಊರುಗಳಿಗೆ ವ್ಯಾಪಾರ ಕೇಂದ್ರ.  ಅಂಚೆ-ತಂತಿ, ದೂರವಾಣಿ, ವಿದ್ಯುತ್, ಆರೋಗ್ಯ ಕೇಂದ್ರ ಮತ್ತು ವಾಚನಾಲಯಗಳ ಸೌಲಭ್ಯವನ್ನು ಹೊಂದಿದೆ.  ಪುರಸಭಾ ಆಡಳಿತ, ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತದವರೆಗಿನ ವಿದ್ಯಾಭ್ಯಾಸ, ಬ್ಯಾಂಕ್ ಮತ್ತು ಸಹಕಾರ ಸಂಘಗಳ ಸೌಕರ್ಯ ಇದೆ.
 
ಹದಿನಾಡ ಪಾಳೇಗಾರ ಸಿಂಗಿದೇವ 1450ರಲ್ಲಿ ಕೆತ್ತಿಸಿದ ಶಾಸನವೊಂದರಲ್ಲಿ ಈ ಊರನ್ನು ಎಳೆಯಿಂದೂರು (ಎಳೆಯಚಂದ್ರ ಅಥವಾ ಬಾಲಚಂದ್ರ ಊರು) ಎಂದು ಕರೆಯಲಾಗಿದೆ.  ಊರ ಸುತ್ತ ಎಂಟುದಿಕ್ಕುಗಳಲ್ಲೂ ಕ್ರಮವಾಗಿ ಶ್ವೇತಗಿರಿ, ಮಲ್ಲಿನಾಥಗಿರಿ, ಸುರಗಿರಿ, ಶಂಕರೇಶ್ವರಗಿರಿ, ಮಲ್ಲಿಕಾರ್ಜುನಗಿರಿ, ಶಂಭುಲಿಂಗಗಿರಿ, ಶ್ರೀಶೈಲಗಿರಿ, ಮತ್ತು ನಿರ್ಮಲಗಿರಿ ಎಂಬ ಬೆಟ್ಟಗಳಿಂದ ಆವೃತವಾಗಿತ್ತೆಂದು ಶಾಸನ ತಿಳಿಸುತ್ತದೆ.  ಅದಕ್ಕೂ ಹಿಂದಿನ ತಮಿಳು ಶಾಸನದಲ್ಲಿ ಇದನ್ನು ಇಳಂದೂರು ಎಂದು ಹೆಸರಿಸಲಾಗಿದೆ.  ಇಲ್ಲಿನ ಗೌರೀಶ್ವರ ದೇವಾಲಯ ದ್ರಾವಿಡ ಶೈಲಿಯ ಸುಂದರ ನಿರ್ಮಾಣ.  ಅದರ ಮಹಾದ್ವಾರ 12 ಅಡಿ ಎತ್ತರದಷ್ಟು ಬೃಹತ್ತಾಗಿದೆ.  ಅಂದವಾದ ಕಲ್ಲಿನ ವಿಗ್ರಹಗಳು ಹಲವಾರು ದೇವ ದೇವಿಯರ ಮನೋಹರ ಮೂರ್ತಿಗಳು ಮತ್ತು ರಾಮಾಯಣದ ಕೆಲವು ದೃಶ್ಯಗಳನ್ನು ಕೆತ್ತಲಾಗಿದೆ.  ಮೊದಲಿಗೆ ಜೈನಬಸದಿಯಿತ್ತೆಂದು ಹೇಳಲಾಗುವ ಸ್ಥಳದಲ್ಲಿ ಈಗ ಒಂದು ವರಾಹಸ್ವಾಮಿ ದೇವಾಲಯವಿದೆ.  ಚೋಳರ ಕಾಲದ ಶಾಸನವೊಂದರಲ್ಲಿ ಈ ಊರನ್ನು ಚೋಳೇಂದ್ರಸಿಂಹ ಚತುರ್ವೇದಿ ಮಂಗಲಂ ಎಂದು ಹೆಸರಿಲಾಗಿದೆ.

ಖ್ಯಾತನಾಮರಾದ ಷಡಕ್ಷರದೇವ (ರಾಜಶೇಖರ ವಿಳಾಸದ ಕರ್ತೃ-1637).  ಜೈನಪಂಡಿತ, ಚಿಕ್ಕದೇವರಾಜರ ಆಸ್ಥಾನದ, ಮುಖ್ಯಮಂತ್ರಿ ವಿಶಾಲಾಕ್ಷ ಪಂಡಿತ (ಯಳಂದೂರು ಪಂಡಿತ-1672). ವೈದ್ಯಗ್ರಂಥ ಕರ್ತೃ ನರಸಿಂಹಭಟ್ಟ, ಹದಿಬದೆಯ ಧರ್ಮವನ್ನು ರಚಿಸಿದ ಸಂಚಿಯ ಹೊನ್ನಮ್ಮ, ನಿಜಗುಣ ಶಿವಯೋಗಿ-ಇವರೆಲ್ಲ ಇಲ್ಲಿನವರು,  ಯಳಂದೂರಿನಿಂದ 5 ಕಿಮೀ ದೂರದಲ್ಲಿರುವ ಶಂಭುಲಿಂಗ ಬೆಟ್ಟದ ಗುಹೆಯೊಂದರಲ್ಲಿ ಷಡಕ್ಷರದೇವರ ತಪಸ್ಸು ಮಾಡುತ್ತಿದ್ದುದಾಗಿಯೂ ಆ ಗುಹೆಗೆ ಈಗಲೂ ಷಡಕ್ಷರಯ್ಯನ ಗುಹೆ ಎಂದು ಕರೆಯುವುದಾಗಿಯೂ ಸ್ಥಳೀಯರು ಹೇಳುತ್ತಾರೆ. 
(ಆರ್.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ